26.10.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ, ಮೊದಲು ಸ್ವಯಂ ನಿರ್ವಿಕಾರಿಗಳಾಗಬೇಕಾಗಿದೆ ನಂತರ ಅನ್ಯರಿಗೆ ಹೇಳಬೇಕಾಗಿದೆ"

ಪ್ರಶ್ನೆ:
ನೀವು ಮಹಾವೀರ ಮಕ್ಕಳು ಯಾವ ಮಾತಿನಲ್ಲಿ ಗಮನ ಕೊಡಬಾರದು? ಕೇವಲ ಯಾವ ಪರಿಶೀಲನೆ ಮಾಡಿಕೊಳ್ಳುತ್ತಾ ಸ್ವಯಂನ್ನು ಸಂಭಾಲನೆ ಮಾಡಿಕೊಳ್ಳಬೇಕು?

ಉತ್ತರ:
ಒಂದುವೇಳೆ ಯಾರಾದರೂ ಪವಿತ್ರರಾಗುವುದರಲ್ಲಿ ವಿಘ್ನ ಹಾಕುತ್ತಾರೆಂದರೆ ನೀವು ಅದರ ಕಡೆ ಗಮನ ಕೊಡಬಾರದು. ಕೇವಲ ಈ ಪರಿಶೀಲನೆ ಮಾಡಿಕೊಳ್ಳಿ - ನಾನು ಮಹಾವೀರನಾಗಿದ್ದೇನೆಯೇ? ನನಗೆ ನಾನು ಮೋಸ ಮಾಡಿಕೊಳ್ಳುತ್ತಿಲ್ಲ ತಾನೆ? ಬೇಹದ್ದಿನ ವೈರಾಗ್ಯವಿದೆಯೇ? ನಾನು ನನ್ನ ಸಮಾನ ಮಾಡಿಕೊಳ್ಳುತ್ತಿದ್ದೇನೆಯೇ? ನನ್ನಲ್ಲಿ ಕ್ರೋಧವಿಲ್ಲವೆ? ಅನ್ಯರಿಗೆ ಏನನ್ನು ಹೇಳುತ್ತೇನೆಯೋ ಅದನ್ನು ನಾನು ಮಾಡುತ್ತಿದ್ದೇನೆಯೇ?

ಗೀತೆ:
ನಿಮ್ಮನ್ನು ಪಡೆದ ನಾನು.....

ಓಂ ಶಾಂತಿ.
ಇದರಲ್ಲಿ ಹೇಳುವ ಮಾತಿಲ್ಲ, ತಿಳಿದುಕೊಳ್ಳುವ ಮಾತಾಗಿದೆ. ಮಧುರಾತಿ ಮಧುರ ಆತ್ಮಿಕ ಮಕ್ಕಳು ನಾವೇ ಪುನಃ ದೇವತೆಗಳಾಗುತ್ತಿದ್ದೇವೆ, ಸಂಪೂರ್ಣ ನಿರ್ವಿಕಾರಿಗಳಾಗುತ್ತಿದ್ದೇವೆಂದು ತಿಳಿದುಕೊಳ್ಳುತ್ತಿದ್ದೀರಿ. ಮಕ್ಕಳೇ, ಕಾಮ ವಿಕಾರವನ್ನು ಗೆಲ್ಲಿರಿ ಅರ್ಥಾತ್ ಪವಿತ್ರರಾಗಿ. ಮಕ್ಕಳು ಗೀತೆಯನ್ನು ಕೇಳಿದಿರಿ, ಈಗ ಪುನಃ ಮಕ್ಕಳಿಗೆ ಸ್ಮೃತಿ ಬಂದಿದೆ - ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೇವೆ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಅಲ್ಲಿ ಕಸಿದುಕೊಳ್ಳುವವರು ಯಾರೂ ಇರುವುದಿಲ್ಲ. ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ ನಂತರ ರಾವಣ ರಾಜ್ಯದಲ್ಲಿ ಬೇರೆಯವರದಾಗುತ್ತದೆ. ನೀವೀಗ ತಿಳಿದುಕೊಳ್ಳುತ್ತಿದ್ದೀರಿ. ಈ ರೀತಿ ತಿಳಿಸಿಕೊಡಬೇಕು - ನಾವು ಭಾರತವನ್ನು ಶ್ರೀಮತದಂತೆ ನಿರ್ವಿಕಾರಿಯನ್ನಾಗಿ ಮಾಡುತ್ತಿದ್ದೇವೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ಎಲ್ಲರೂ ಹೇಳುತ್ತಾರೆ. ಅವರಿಗೇ ತಂದೆಯೆಂದು ಕರೆಯಲಾಗುವುದು. ಅಂದಾಗ ಇದನ್ನೂ ತಿಳಿಸಬೇಕು ಮತ್ತು ಬರೆಯಬೇಕು - ಯಾವ ಭಾರತವು ಸಂಪೂರ್ಣ ನಿರ್ವಿಕಾರಿ, ಸ್ವರ್ಗವಾಗಿತ್ತೋ ಅದು ಈಗ ವಿಕಾರಿ ನರಕವಾಗಿ ಬಿಟ್ಟಿದೆ. ಪುನಃ ನಾವು ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ತಂದೆಯು ಏನನ್ನು ತಿಳಿಸುವರೋ ಅದನ್ನು ನೋಟ್ ಮಾಡಿಕೊಂಡು ಅದರಮೇಲೆ ವಿಚಾರ ಸಾಗರ ಮಂಥನ ಮಾಡಿ. ಬರೆಯುವುದರಲ್ಲಿ ಸಹಯೋಗ ಕೊಡಬೇಕು. ಹೀಗೆ ಯಾವ ರೀತಿ ಬರೆಯಬೇಕು ಅದರಿಂದ ಮನುಷ್ಯರಿಗೆ ಭಾರತವು ಅವಶ್ಯವಾಗಿ ಸ್ವರ್ಗವಾಗಿತ್ತೆಂದು ಅರ್ಥವಾಗಬೇಕು. ರಾವಣ ರಾಜ್ಯವೇ ಇರಲಿಲ್ಲ, ಮಕ್ಕಳಿಗೆ ಬುದ್ಧಿಯಲ್ಲಿದೆ - ನಾವು ಭಾರತವಾಸಿಗಳನ್ನು ತಂದೆಯು ನಿರ್ವಿಕಾರಿಗಳನ್ನಾಗಿ ಮಾಡುತ್ತಿದ್ದಾರೆ. ಮೊದಲು ತಮ್ಮನ್ನು ನೋಡಿಕೊಳ್ಳಿ - ನಾನು ನಿರ್ವಿಕಾರಿಯಾಗಿದ್ದೇನೆಯೇ? ಈಶ್ವರನಿಗೆ ಮೋಸ ಮಾಡುತ್ತಿಲ್ಲವೆ? ಈಶ್ವರನೇ ನಮ್ಮನ್ನು ನೋಡುತ್ತಾರೆಯೇ ಎನ್ನುವುದಲ್ಲ. ನಿಮ್ಮ ಬಾಯಿಂದ ಈ ಶಬ್ಧವೂ ಬರಬಾರದು. ನಿಮಗೆ ತಿಳಿದಿದೆ - ಪವಿತ್ರರನ್ನಾಗಿ ಮಾಡುವಂತಹ ಪತಿತ-ಪಾವನ ತಂದೆಯು ಒಬ್ಬರೇ ಆಗಿದ್ದಾರೆ. ಭಾರತವು ನಿರ್ವಿಕಾರಿಯಾಗಿದ್ದಾಗ ಸ್ವರ್ಗವಾಗಿತ್ತು. ಇವರು ಸಂಪೂರ್ಣ ನಿರ್ವಿಕಾರಿಗಳಲ್ಲವೆ. ಯಥಾ ರಾಜ-ರಾಣಿ ತಥಾ ಪ್ರಜೆಗಳೂ ಸಹ ನಿರ್ವಿಕಾರಿಗಳಾಗಿರುವರು ಆದ್ದರಿಂದ ಇಡೀ ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆಯಲ್ಲವೆ. ಈಗ ನರಕವಾಗಿದೆ. ಈ 84 ಜನ್ಮಗಳ ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಒಳ್ಳೆಯವರಿಗೇ ಇದನ್ನು ಕೊಡುಗೆಯಾಗಿ ಕೊಡಬಹುದು. ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ದೊಡ್ಡ ಉಡುಗೊರೆ ಸಿಗುತ್ತದೆಯಲ್ಲವೆ ಅಂದಾಗ ನೀವೂ ಸಹ ಯಾರಾದರೂ ಬಂದರೆ ಅವರಿಗೆ ತಿಳಿಸಿ, ಇಂತಹ ಉಡುಗೊರೆಯನ್ನು ಕೊಡಬಹುದು. ಯಾವಾಗಲೂ ಉಡುಗೊರೆಯನ್ನು ಕೊಡಲು ವಸ್ತುಗಳು ತಯಾರಿರುತ್ತವೆ ಹಾಗೆಯೇ ನಿಮ್ಮ ಬಳಿಯೂ ಸಹ ಜ್ಞಾನದ ಉಡುಗೊರೆಯು ತಯಾರಿರಬೇಕು. ಏಣಿಯ ಚಿತ್ರದಲ್ಲಿ ಸಂಪೂರ್ಣ ಜ್ಞಾನವಿದೆ. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದು ನೆನಪಿರಬೇಕು. ಇದು ತಿಳುವಳಿಕೆಯ ಮಾತಲ್ಲವೆ. ಯಾರು ಮೊಟ್ಟ ಮೊದಲಿಗೆ ಬಂದರೋ ಅವರೇ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ತಂದೆಯು 84 ಜನ್ಮಗಳನ್ನು ತಿಳಿಸಿ ನಂತರ ಹೇಳುತ್ತಾರೆ - ನಾನು ಇವರ (ಬ್ರಹ್ಮಾ) ಬಹಳ ಜನ್ಮಗಳ ಅಂತಿಮದಲ್ಲಿ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ ನಂತರ ಇವರಿಗೆ ಬ್ರಹ್ಮಾ ಎಂದು ಹೆಸರಿಡುತ್ತೇನೆ ನಂತರ ಇವರ ಮೂಲಕ ಬ್ರಾಹ್ಮಣರನ್ನು ರಚಿಸುತ್ತೇನೆ. ಇಲ್ಲವೆಂದರೆ ಬ್ರಾಹ್ಮಣರನ್ನು ಎಲ್ಲಿಂದ ತರಲಿ? ಬ್ರಹ್ಮನ ತಂದೆಯ ಹೆಸರನ್ನು ಎಂದಾದರೂ ಕೇಳಿದಿರಾ? ಅವಶ್ಯವಾಗಿ ಭಗವಂತನೆಂದೇ ಹೇಳುತ್ತಾರೆ. ಬ್ರಹ್ಮಾ ಮತ್ತು ವಿಷ್ಣುವನ್ನು ಸೂಕ್ಷವತನದಲ್ಲಿ ತೋರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಇವರ 84 ಜನ್ಮಗಳ ಅಂತ್ಯದಲ್ಲಿ ಪ್ರವೇಶ ಮಾಡುತ್ತೇನೆ. ದತ್ತು ಮಾಡಿಕೊಂಡರೆ ಹೆಸರನ್ನು ಬದಲಾಯಿಸುತ್ತಾರಲ್ಲವೆ. ಸನ್ಯಾಸಿಗಳು ಸನ್ಯಾಸ ಮಾಡಿದಾಗ ಕೂಡಲೇ ಎಲ್ಲವನ್ನೂ ಮರೆತು ಹೋಗುವುದಿಲ್ಲ, ಅವಶ್ಯವಾಗಿ ನೆನಪಿರುತ್ತದೆ. ನಿಮಗೂ ಸಹ ನೆನಪಿರುವುದು ಆದರೆ ನಿಮಗೆ ಪ್ರಪಂಚದ ಪ್ರತಿ ವೈರಾಗ್ಯವಿದೆ ಏಕೆಂದರೆ ನಿಮಗೆ ತಿಳಿದಿದೆ - ಇದೆಲ್ಲವೂ ಸ್ಮಶಾನವಾಗಲಿದೆ. ಆದ್ದರಿಂದ ನಾವು ಅದನ್ನು ಏಕೆ ನೆನಪು ಮಾಡಬೇಕು! ಜ್ಞಾನದಿಂದ ಎಲ್ಲವನ್ನೂ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಅವರೂ ಸಹ ಜ್ಞಾನದಿಂದಲೇ ಗೃಹಸ್ಥವನ್ನು ತ್ಯಜಿಸುತ್ತಾರೆ. ನೀವು ಗೃಹಸ್ಥವನ್ನು ಹೇಗೆ ಬಿಟ್ಟಿರಿ ಎಂದು ಅವರನ್ನು ಕೇಳಿದರೆ ಹೇಳುವುದಿಲ್ಲ ಮತ್ತೆ ಅವರಿಗೆ ಯುಕ್ತಿಯಿಂದ ಹೇಳಬೇಕು - ತಮಗೆ ಹೇಗೆ ವೈರಾಗ್ಯವು ಬಂದಿತು ಎಂಬುದನ್ನು ನಮಗೂ ತಿಳಿಸಿದರೆ ನಾವೂ ಸಹ ಅದೇರೀತಿ ಮಾಡುವೆವು. ನೀವು ಪವಿತ್ರರಾಗಿ ಎಂದು ಒತ್ತುಕೊಟ್ಟು ಹೇಳುತ್ತೀರಿ ಬಾಕಿ ನಿಮಗೆ ಎಲ್ಲವೂ ನೆನಪಿದೆ. ಬಾಲ್ಯದಿಂದ ಹಿಡಿದು ಎಲ್ಲವನ್ನೂ ತಿಳಿಸಬಲ್ಲಿರಿ. ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ - ಹೇಗೆ ಇವರೆಲ್ಲಾ ಡ್ರಾಮಾದ ಪಾತ್ರಧಾರಿಗಳಾಗಿದ್ದಾರೆ, ಪಾತ್ರವನ್ನಭಿನಯಿಸಲು ಬಂದಿದ್ದಾರೆ. ಈಗ ಎಲ್ಲರ ಕಲಿಯುಗೀ ಕರ್ಮಬಂಧನವು ಕಳೆಯಲಿದೆ ನಂತರ ಶಾಂತಿಧಾಮಕ್ಕೆ ಹೋಗುವಿರಿ. ಅಲ್ಲಿಂದ ಮತ್ತೆ ಎಲ್ಲರದೂ ಹೊಸ ಸಂಬಂಧವು ಆರಂಭವಾಗುವುದು. ತಿಳಿಸಿಕೊಡಲು ಹೊಸ-ಹೊಸ ವಿಚಾರಗಳನ್ನು ತಂದೆಯು ತಿಳಿಸುತ್ತಿರುತ್ತಾರೆ. ಇದೇ ಭಾರತವಾಸಿಗಳು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಾಗ ನಿರ್ವಿಕಾರಿಗಳಾಗಿದ್ದರು ಮತ್ತೆ 84 ಜನ್ಮಗಳ ನಂತರ ವಿಕಾರಿಗಳಾದರು. ಈಗ ಮತ್ತೆ ನಿರ್ವಿಕಾರಿಗಳಾಗಬೇಕಾಗಿದೆ ಆದರೆ ಪುರುಷಾರ್ಥ ಮಾಡಿಸುವವರು ಅವಶ್ಯವಾಗಿ ಬೇಕು. ಈಗ ನಿಮಗೆ ತಂದೆಯು ತಿಳಿಸಿದ್ದಾರೆ - ಮಕ್ಕಳೇ, ನೀವು ಕಲ್ಪದ ಹಿಂದಿನ ಅದೇ ನನ್ನ ಮಕ್ಕಳಾಗಿದ್ದೀರಿ. ಬಾಬಾ, ತಾವೂ ಸಹ ಕಲ್ಪದ ಹಿಂದಿನವರೇ ಆಗಿದ್ದೀರೆಂದು ಮಕ್ಕಳೇ ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಕಲ್ಪದ ಹಿಂದೆಯೂ ಸಹ ನಿಮಗೆ ಓದಿಸಿ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು. ಕಲ್ಪ-ಕಲ್ಪವೂ ಇದೇ ರೀತಿ ಮಾಡುತ್ತಿರುತ್ತೇನೆ. ಡ್ರಾಮಾದಲ್ಲಿ ಏನೆಲ್ಲವೂ ಆಯಿತೋ, ವಿಘ್ನಗಳು ಬಂದವೋ ಇವು ಪುನಃ ಬರುತ್ತವೆ. ಜೀವನದಲ್ಲಿ ಏನೇನಾಗುತ್ತದೆ ಎಂಬುದು ನೆನಪಂತೂ ಇರುತ್ತದೆಯಲ್ಲವೆ. ಇವರಿಗಂತೂ (ಬ್ರಹ್ಮಾ) ಎಲ್ಲವೂ ನೆನಪಿದೆ. ಹಳ್ಳಿಯ ಗೊಲ್ಲ ಬಾಲಕನಾಗಿದ್ದರ ಮತ್ತೆ ವೈಕುಂಠದ ಮಾಲೀಕರಾದರೆಂದು ತಿಳಿಸುತ್ತಾರೆ. ವೈಕುಂಠದಲ್ಲಿ ಹಳ್ಳಿಯಿರುತ್ತದೆಯೇ! ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. ಈ ಸಮಯದಲ್ಲಿ ನಿಮಗೆ ಈ ಹಳೆಯ ಪ್ರಪಂಚವೇ ಹಳ್ಳಿಯಂತಿದೆಯಲ್ಲವೆ. ವೈಕುಂಠವೆಲ್ಲಿ? ನರಕವೆಲ್ಲಿ? ಮನುಷ್ಯರಂತೂ ದೊಡ್ಡ-ದೊಡ್ಡ ಮಹಲು ಕಟ್ಟಡಗಳನ್ನು ನೋಡಿ ಇದೇ ಸ್ವರ್ಗವಾಗಿದೆಯಂದು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಕಲ್ಲು-ಮಣ್ಣಾಗಿದೆ. ಇದಕ್ಕೆ ಯಾವುದೇ ಬೆಲೆಯಿಲ್ಲ. ಬೆಲೆಯು ಎಲ್ಲದಕ್ಕಿಂತ ಹೆಚ್ಚಿನದಾಗಿ ವಜ್ರಕ್ಕಿರುತ್ತದೆ. ವಿಚಾರ ಮಾಡಿ - ಸತ್ಯಯುಗದಲ್ಲಿ ಚಿನ್ನದ ಮಹಲುಗಳು ಹೇಗಿತ್ತು, ಅಲ್ಲಿ ಎಲ್ಲಾ ಗಣಿಗಳು ಸಂಪನ್ನವಾಗಿರುತ್ತವೆ. ಚಿನ್ನವು ಹೇರಳವಾಗಿರುತ್ತವೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಾಗಬೇಕು! ಬೇಸರವಾದಾಗ ತಂದೆಯು ತಿಳಿಸಿದ್ದಾರೆ - ಇಂತಹ ಒಳ್ಳೊಳ್ಳೆಯ ಹಾಡುಗಳನ್ನು ಹಾಕಿಕೊಳ್ಳಿ ಆಗ ನಿಮ್ಮನ್ನು ಖುಷಿಯಲ್ಲಿ ತಂದು ಬಿಡುತ್ತದೆ. ಇಡೀ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ನಿಮಗೆ ತಿಳಿದಿದೆ, ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅದನ್ನು ಎಂದೂ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅರ್ಧ ಕಲ್ಪಕ್ಕಾಗಿ ನಾವು ಸುಖಧಾಮದ ಮಾಲೀಕರಾಗುತ್ತೇವೆ. ನಾವು ಈ ಹದ್ದಿನ ರಾಜಧಾನಿಗೆ ವಾರಸುಧಾರನಾಗಿದ್ದೇನೆಂದು ರಾಜನ ಮಗು ತಿಳಿದುಕೊಳ್ಳುತ್ತಾನೆ ಅಂದಮೇಲೆ ನಾವು ಬೇಹದ್ದಿನ ತಂದೆಗೆ ವಾರಸುಧಾರರಾಗಿದ್ದೇವೆಂದು ನಿಮಗೆ ಎಷ್ಟು ನಶೆಯಿರಬೇಕು! ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ನಾವು 21 ಜನ್ಮಗಳಿಗಾಗಿ ವಾರಸುಧಾರರಾಗುತ್ತೇವೆಂದು ಎಷ್ಟು ಖುಷಿಯಿರಬೇಕು! ಯಾರ ವಾರಸುಧಾರರಾಗುವಿರೋ ಅವರನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ನೆನಪು ಮಾಡದೇ ವಾರಸುಧಾರರಾಗಲು ಸಾಧ್ಯವಿಲ್ಲ. ನೆನಪು ಮಾಡಿ ಪವಿತ್ರರಾದಾಗಲೇ ವಾರಸುಧಾರರಾಗುವಿರಿ. ನಿಮಗೆ ತಿಳಿದಿದೆ - ನಾವು ಶ್ರೀಮತದಂತೆ ವಿಶ್ವದ ಮಾಲೀಕರು, ಡಬಲ್ ಕಿರೀಟಧಾರಿಗಳಾಗುತ್ತೇವೆ. ಜನ್ಮ-ಜನ್ಮದಲ್ಲಿಯೂ ರಾಜ್ಯಭಾರ ಮಾಡುತ್ತೇವೆ. ಮನುಷ್ಯರು ಭಕ್ತಿಮಾರ್ಗದಲ್ಲಿ ವಿನಾಶೀ ದಾನ-ಪುಣ್ಯ ಮಾಡುತ್ತಾರೆ. ನಿಮ್ಮದು ಅವಿನಾಶಿ ಜ್ಞಾನ ಧನವಾಗಿದೆ. ನಿಮಗೆ ಎಷ್ಟು ದೊಡ್ಡ ಲಾಟರಿ ಸಿಗುತ್ತದೆ! ಕರ್ಮಗಳನುಸಾರವೇ ಫಲ ಸಿಗುತ್ತದೆಯಲ್ಲವೆ. ಯಾರಾದರೂ ದೊಡ್ಡ ರಾಜನ ಮಗನಾದರೆ ದೊಡ್ಡ ಲೌಕಿಕದ ಲಾಟರಿಯು ಸಿಗುತ್ತದೆಯಂದು ಹೇಳುತ್ತಾರೆ. ಸಿಂಗಲ್ ಕಿರೀಟಧಾರಿಗಳು ಇಡೀ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಡಬಲ್ ಕಿರೀಟಧಾರಿಗಳು ವಿಶ್ವದ ಮಾಲೀಕರು ನೀವಾಗುತ್ತೀರಿ. ಆ ಸಮಯದಲ್ಲಿ ಮತ್ತ್ಯಾವ ರಾಜ್ಯವೂ ಇರುವುದಿಲ್ಲ ನಂತರ ಅನ್ಯ ಧರ್ಮದವರು ಬರುತ್ತಾರೆ. ಅವರು ವೃದ್ಧಿಯನ್ನು ಪಡೆಯುವವರೆಗೆ ಮೊದಲಿನ ರಾಜರು ವಿಕಾರಿಗಳಾಗುವ ಕಾರಣ ಮತಭೇದದಲ್ಲಿ ಬಂದು ರಾಜ್ಯವನ್ನು ತುಂಡು-ತುಂಡಾಗಿ ಮಾಡಿ ಬಿಡುತ್ತಾರೆ. ಮೊದಲು ಇಡೀ ವಿಶ್ವದಲ್ಲಿ ಒಂದೇ ರಾಜ್ಯವಿತ್ತು, ಇದು ಹಿಂದಿನ ಜನ್ಮದ ಕರ್ಮಗಳ ಫಲವೆಂದು ಸತ್ಯಯುಗದಲ್ಲಿ ಹೇಳುವುದಿಲ್ಲ. ಈಗ ತಂದೆಯು ನೀವು ಮಕ್ಕಳಿಗೆ ಶ್ರೇಷ್ಠ ಕರ್ಮವನ್ನು ಕಲಿಸುತ್ತಿದ್ದಾರೆ. ಯಾರು ಎಂತೆಂತಹ ಕರ್ಮ ಮಾಡುವರೋ ಅದಕ್ಕೆ ಪ್ರತಿಫಲವು ಅದೇರೀತಿ ಸಿಗುವುದು, ಆದ್ದರಿಂದ ಒಳ್ಳೆಯ ಕರ್ಮವನ್ನೇ ಮಾಡಬೇಕು. ಯಾವುದೇ ಕರ್ಮ ಮಾಡುತ್ತೀರಿ, ಇದು ಎಂತಹ ಕರ್ಮವೆಂಬುದು ಅರ್ಥವಾಗದಿದ್ದರೆ ಅದಕ್ಕಾಗಿ ಶ್ರೀಮತ ತೆಗೆದುಕೊಳ್ಳಬೇಕಾಗಿದೆ. ಮತ್ತೆ-ಮತ್ತೆ ಪತ್ರಿಕೆಯ ಮೂಲಕ ಕೇಳಬೇಕಾಗಿದೆ. ನಿಮಗೆ ತಿಳಿದಿದೆ – ಪ್ರಧಾನ ಮಂತ್ರಿಗಳಿಗೆ ಎಷ್ಟು ಪತ್ರಗಳು ಬರಬಹುದು, ಆದರೆ ಅವರೊಬ್ಬರೇ ಅದನ್ನು ಓದುವುದಿಲ್ಲ. ಅವರ ಮುಂದೆ ಅನೇಕರು ಕಾರ್ಯದರ್ಶಿಗಳಿರುತ್ತಾರೆ. ಅವರು ಎಲ್ಲಾ ಪತ್ರಗಳನ್ನು ನೋಡುತ್ತಾರೆ. ಯಾವುದು ಮುಖ್ಯವಾಗಿರುವುದೋ ಅದನ್ನು ಪ್ರಧಾನ ಮಂತ್ರಿಯ ಮೇಜಿನ ಮೇಲೆ ಇಡುತ್ತಾರೆ. ಇಲ್ಲಿಯೂ ಅದೇರೀತಿ ಆಗುತ್ತದೆ. ಮುಖ್ಯವಾದ ಪತ್ರಗಳಿಗೆ ಕೂಡಲೇ ಪ್ರತ್ಯುತ್ತರವನ್ನು ಕೊಡುತ್ತಾರೆ. ಉಳಿದುದಕ್ಕೆ ಕೇವಲ ನೆನಪು, ಪ್ರೀತಿಯನ್ನು ಬರೆದು ಕಳುಹಿಸುತ್ತಾರೆ. ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಕುಳಿತು ಪತ್ರ ಬರೆಯಲು ಸಾಧ್ಯವಿಲ್ಲ, ಬಹಳ ಕಷ್ಟವಾಗುವುದು. ಮಕ್ಕಳಿಗೆ ಎಷ್ಟು ಖುಷಿಯಾಗುತ್ತದೆ - ಓಹೋ! ಇದು ಬೇಹದ್ದಿನ ಪತ್ರವು ಬಂದಿದೆಯಂದು. ಶಿವ ತಂದೆಯು ಬ್ರಹ್ಮಾರವರ ಮೂಲಕ ಪ್ರತ್ಯುತ್ತರ ನೀಡುತ್ತಾರೆ. ಮಕ್ಕಳಿಗೆ ಬಹಳ ಖುಷಿಯಾಗುತ್ತದೆ. ಎಲ್ಲರಿಗಿಂತ ಹೆಚ್ಚಿನದಾಗಿ ಬಂಧನದಲ್ಲಿರುವವರು ಗದ್ಗದಿತರಾಗುತ್ತಾರೆ - ಓಹೋ! ನಾವು ಬಂಧನದಲ್ಲಿದ್ದೇವೆ, ಬೇಹದ್ದಿನ ತಂದೆಯು ನಮಗೆ ಹೇಗೆ ಪತ್ರವನ್ನು ಬರೆಯುತ್ತಾರೆ ಎಂದು ಕಣ್ಣಿಗೊತ್ತಿಕೊಳ್ಳುತ್ತಾರೆ. ಅಜ್ಞಾನ ಕಾಲದಲ್ಲಿಯೂ ಪತಿಯನ್ನು ಪರಮಾತ್ಮನೆಂದು ತಿಳಿದುಕೊಳ್ಳುವವರಿಗೆ ಪತಿಯಿಂದ ಪತ್ರವು ಬಂದಾಗ ಅದಕ್ಕೆ ಮುತ್ತಿಡುತ್ತಾರೆ. ನಿಮ್ಮಲ್ಲಿಯೂ ಸಹ ಬಾಪ್ದಾದಾರವರ ಪತ್ರವನ್ನು ನೋಡಿ ಕೆಲವು ಮಕ್ಕಳು ರೋಮಾಂಚನವಾಗಿ ನಿಲ್ಲುತ್ತಾರೆ, ಆನಂದ ಬಾಷ್ಫಗಳು ಬಂದು ಬಿಡುತ್ತವೆ, ಅದಕ್ಕೆ ಮುತ್ತಿಡುತ್ತಾರೆ, ಕಣ್ಣಿಗೊತ್ತಿಕೊಳ್ಳುತ್ತಾರೆ. ಬಹಳ ಪ್ರೀತಿಯಿಂದ ಪತ್ರವನ್ನು ಓದುತ್ತಾರೆ. ಬಂಧನದಲ್ಲಿರುವವರು ಕಡಿಮೆಯೆ! ಕೆಲವು ಮಕ್ಕಳ ಮೇಲೆ ಮಾಯೆಯು ಜಯ ಗಳಿಸುತ್ತದೆ. ಕೆಲವರು ತಿಳಿದುಕೊಳ್ಳುತ್ತಾರೆ - ನಾವಂತೂ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಭಾರತವು ನಿರ್ವಿಕಾರಿಯಾಗಿತ್ತಲ್ಲವೆ. ಈಗ ವಿಕಾರಿಯಾಗಿದೆ. ಯಾರು ಈಗ ನಿರ್ವಿಕಾರಿಗಳಾಗಬೇಕಾಗಿದೆಯೋ ಅವರೇ ಪುರುಷಾರ್ಥ ಮಾಡುತ್ತಾರೆ ಕಲ್ಪದ ಹಿಂದಿನಂತೆ. ನೀವು ಮಕ್ಕಳು ಬಹಳ ಸಹಜವಾಗಿ ತಿಳಿಸಬಹುದಾಗಿದೆ. ನಿಮ್ಮದು ಇದು ಯುಕ್ತಿಯಾಗಿದೆ. ಗೀತಾಯುಗವು ನಡೆಯುತ್ತಿದೆ, ಗೀತೆಗೆ ಪುರುಷೋತ್ತಮ ಯುಗವೆಂದು ಹೇಳಲಾಗುತ್ತದೆ ಅಂದಾಗ ನೀವು ಈ ರೀತಿ ಬರೆಯಿರಿ, ಇದು ಗೀತೆಯ ಪುರುಷೋತ್ತಮ ಯುಗವಾಗಿದೆ. ಈಗ ಹಳೆಯ ಪ್ರಪಂಚವು ಬದಲಾಗಿ ಹೊಸದಾಗುತ್ತದೆ. ನಿಮ್ಮ ಬುದ್ಧಿಯಲ್ಲಿದೆ - ಬೇಹದ್ದಿನ ತಂದೆಯು ನಮಗೆ ಶಿಕ್ಷಕನೂ ಆಗಿದ್ದಾರೆ, ಅವರಿಂದ ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಚೆನ್ನಾಗಿ ಓದಿದರೆ ಡಬಲ್ ಕಿರೀಟಧಾರಿಗಳಾಗುತ್ತೀರಿ. ಇದು ದೊಡ್ಡ ಶಾಲೆಯಾಗಿದೆ! ರಾಜಧಾನಿಯು ಸ್ಥಾಪನೆಯಾಗುತ್ತದೆ, ಪ್ರಜೆಗಳೂ ಅನೇಕ ಪ್ರಕಾರದವರು ತಯಾರಾಗುವರು. ರಾಜಧಾನಿಯು ವೃದ್ಧಿಯಾಗುತ್ತಾ ಇರುವುದು. ಕಡಿಮೆ ಜ್ಞಾನವನ್ನು ಪಡೆಯುವವರು ಕೊನೆಯಲ್ಲಿ ಬರುತ್ತಾರೆ. ಯಾರು ಎಂತಹ ಪುರುಷಾರ್ಥ ಮಾಡುವರೋ ಅವರು ಮೊದಲು ಬರುತ್ತಿರುತ್ತಾರೆ. ಇದೆಲ್ಲವೂ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಈ ಡ್ರಾಮಾದ ಚಕ್ರವು ಪುನರಾವರ್ತನೆಯಾಗುತ್ತದೆಯಲ್ಲವೆ. ನೀವೀಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ- ಪಾವನರಾಗಿ, ಇದರಲ್ಲಿ ಯಾರಾದರೂ ವಿಘ್ನ ಹಾಕಿದರೆ ಅದರ ಚಿಂತೆ ಮಾಡಬೇಡಿ. ನೀವು ಮಹಾವೀರರಾಗಿ ತಿನ್ನಲು ರೊಟ್ಟಿಯಂತೂ ಸಿಗುತ್ತದೆಯಲ್ಲವೆ. ಮಕ್ಕಳು ಪುರುಷಾರ್ಥ ಮಾಡಬೇಕು ಆಗ ನೆನಪಿರುವುದು. ತಂದೆಯು ಭಕ್ತಿಮಾರ್ಗದ ಉದಾಹರಣೆಯನ್ನು ತಿಳಿಸುತ್ತಾರೆ - ಪೂಜೆಯ ಸಮಯದಲ್ಲಿ ಬುದ್ಧಿಯೋಗವು ಹೊರಗೆ ಹೋದರೆ ತಮ್ಮ ಕಿವಿಯನ್ನು ಹಿಡಿದುಕೊಳ್ಳುತ್ತಿದ್ದರು, ಪೆಟ್ಟನ್ನು ಕೊಟ್ಟುಕೊಳ್ಳುತ್ತಿದ್ದರು. ಈಗಂತೂ ಇದು ಜ್ಞಾನವಾಗಿದೆ, ಇದರಲ್ಲಿಯೂ ಮುಖ್ಯವಾದ ಮಾತು ನೆನಪಾಗಿದೆ. ನೆನಪು ಮರೆತು ಹೋದರೆ ತನಗೆ ತಾನು ಪೆಟ್ಟು ಕೊಟ್ಟುಕೊಳ್ಳಬೇಕು. ಮಾಯೆಯು ನನ್ನ ಮೇಲೆ ಏಕೆ ಜಯ ಗಳಿಸುತ್ತದೆ. ನಾನು ಅಷ್ಟು ಕಚ್ಚಾ ಆಗಿದ್ದೇನೆಯೇ? ನಾನಂತೂ ಇದರ ಮೇಲೆ ಜಯ ಗಳಿಸಬೇಕು. ಹೀಗೆ ತನ್ನನ್ನು ತಾನು ಚೆನ್ನಾಗಿ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಇಷ್ಟು ಮಹಾವೀರನಾಗಿದ್ದೇನೆಯೇ? ಅನ್ಯರನ್ನೂ ಮಹಾವೀರರನ್ನಾಗಿ ಮಾಡುವ ಪುರುಷಾರ್ಥ ಮಾಡಬೇಕಾಗಿದೆ. ಎಷ್ಟು ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುವಿರೋ ಅಷ್ಟು ಶ್ರೇಷ್ಠ ಪದವಿ ಸಿಗುವುದು, ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ರೇಸ್ ಮಾಡಬೇಕಾಗಿದೆ. ಒಂದುವೇಳೆ ನಮ್ಮಲ್ಲಿಯೇ ಕ್ರೋಧವಿದ್ದರೆ ಕ್ರೋಧ ಮಾಡಬಾರದೆಂದು ಹೇಗೆ ಹೇಳುವುದು. ಇದು ಸತ್ಯತೆಯಾಗಲಿಲ್ಲ ಅಲ್ಲವೆ. ಅಂದಾಗ ನಾಚಿಕೆಯಾಗಬೇಕು. ಅನ್ಯರಿಗೆ ತಿಳಿಸಿ, ಅವರು ಶ್ರೇಷ್ಠರಾಗಿ ನಾವು ಕನಿಷ್ಠರಾಗಿಯೇ ಉಳಿದು ಬಿಟ್ಟರೆ ಇದು ಪುರುಷಾರ್ಥವೇ! (ಪಂಡಿತನ ಕಥೆಯಂತೆ). ತಂದೆಯನ್ನು ನೆನಪು ಮಾಡುತ್ತಾ ನೀವು ಈ ವಿಷಯ ಸಾಗರದಿಂದ ಕ್ಷೀರ ಸಾಗರಕ್ಕೆ ಹೊರಟು ಹೋಗುತ್ತೀರಿ. ಬಾಕಿ ಇವೆಲ್ಲಾ ಉದಾಹರಣೆಗಳನ್ನು ತಂದೆಯು ತಿಳಿಸುತ್ತಿದ್ದಾರೆ. ಪುನಃ ಭಕ್ತಿಯಲ್ಲಿ ಪುನರಾವರ್ತನೆ ಮಾಡುತ್ತಾರೆ. ಭ್ರಮರಿಯ ಉದಾಹರಣೆಯಿದೆ. ನೀವು ಬ್ರಾಹ್ಮಣಿಯರಾಗಿದ್ದೀರಲ್ಲವೆ. ಬ್ರಹ್ಮಾಕುಮಾರರು... ಇದಂತೂ ಸತ್ಯ-ಸತ್ಯವಾದ ಬ್ರಾಹ್ಮಣರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾ ಎಲ್ಲಿದ್ದಾರೆ? ಅವಶ್ಯವಾಗಿ ಇಲ್ಲಿಯೇ ಇರುವರಲ್ಲವೆ, ಅಲ್ಲಿರುತ್ತಾರೆಯೆ! ನೀವು ಮಕ್ಕಳು ಬಹಳ ಬುದ್ಧಿವಂತರಾಗಬೇಕಾಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದು ತಂದೆಯ ಉಪಾಯವಾಗಿದೆ. ತಿಳಿಸುವುದಕ್ಕಾಗಿ ಈ ಚಿತ್ರಗಳೂ ಇವೆ. ಇದರಲ್ಲಿ ಬರವಣಿಗೆಯೂ ಅದೇರೀತಿ ಇರಬೇಕು. ಇದು ಗೀತೆಯ ಭಗವಂತನ ಯೋಜನೆಯಲ್ಲವೆ. ನಾವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆ. ಇದು ಒಬ್ಬರ ಮಾತಲ್ಲ. ಬ್ರಾಹ್ಮಣರು ಶಿಖೆಗೆ ಸಮಾನರಾದರಲ್ಲವೆ. ಈ ಸಮಯದಲ್ಲಿ ಬಹಳ ದೊಡ್ಡ ಪರಿವಾರವಾಗುತ್ತದೆಯಲ್ಲವೆ. ನೀವೇ ಮತ್ತೆ ದೈವೀ ಪರಿವಾರದಲ್ಲಿ ಬರುತ್ತೀರಿ. ಈ ಸಮಯದಲ್ಲಿ ನಿಮಗೆ ಬಹಳ ಖುಷಿಯಾಗುತ್ತದೆ ಏಕೆಂದರೆ ನಿಮಗೆ ಲಾಟರಿ ಸಿಗುತ್ತದೆ. ನಿಮ್ಮ ಹೆಸರು ಪ್ರಸಿದ್ಧವಾಗಿದೆ, ವಂದೇ ಮಾತರಂ, ಶಿವನ ಶಕ್ತಿಸೇನೆಯು ನೀವಾಗಿದ್ದೀರಲ್ಲವೆ. ಆ ಸೇನೆಯಲ್ಲವೂ ಅಸತ್ಯ ಸೇನೆಯಾಗಿದೆ. ಬಹಳ ಮಂದಿ ಇರುವ ಕಾರಣ ಮನುಷ್ಯರು ತಬ್ಬಿಬ್ಬಾಗುತ್ತಾರೆ ಆದ್ದರಿಂದ ರಾಜಧಾನಿಯು ಸ್ಥಾಪನೆಯಾಗುವುದರಲ್ಲಿ ಪರಿಶ್ರಮವಾಗುತ್ತದೆ. ತಂದೆಯು ತಿಳಿಸುತ್ತಾರೆ - ಈ ನಾಟಕವು ಮಾಡಲ್ಪಟ್ಟಿದ್ದೆ, ಇದರಲ್ಲಿ ನನ್ನದೂ ಪಾತ್ರವಿದೆ. ನಾನು ಸರ್ವಶಕ್ತಿವಂತನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ನೀವು ಪವಿತ್ರರಾಗುತ್ತೀರಿ. ಎಲ್ಲದಕ್ಕಿಂತ ದೊಡ್ಡ ಅಯಸ್ಕಾಂತವು ಶಿವ ತಂದೆಯಾಗಿದ್ದಾರೆ. ಅವರೇ ಅತಿಮೇಲಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಇದೇ ನಶೆ ಹಾಗೂ ಖುಷಿಯಲ್ಲಿರಬೇಕು - ನಾವು 21 ಜನ್ಮಗಳಿಗಾಗಿ ಬೇಹದ್ದಿನ ತಂದೆಗೆ ವಾರಸುಧಾರರಾಗಿದ್ದೇವೆ, ಯಾರಿಗೆ ವಾರಸುಧಾರರಾಗಿದ್ದೀರೋ ಅವರನ್ನು ನೆನಪು ಮಾಡಬೇಕು ಮತ್ತು ಅವಶ್ಯವಾಗಿ ಪವಿತ್ರರಾಗಬೇಕು.

2. ತಂದೆಯು ಯಾವ ಶ್ರೇಷ್ಠ ಕರ್ಮವನ್ನು ಕಲಿಸುತ್ತಿದ್ದಾರೆ ಅದೇ ಕರ್ಮವನ್ನು ಮಾಡಬೇಕು. ಶ್ರೀಮತವನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ.

ವರದಾನ:
ಮನಸ್ಸಿನ ಮೇಲೆ ಪೂರ್ತಿ ಗಮನ ಕೊಡುವಂತಹವರು ಏರುವ ಕಲೆಯ ಅನುಭವಿ ವಿಶ್ವ ಪರಿವರ್ತಕ ಭವ.

ಈಗ ಅಂತಿಮ ಸಮಯದಲ್ಲಿ ಮನಸ್ಸಿನ ಮುಖಾಂತರವೇ ವಿಶ್ವ ಪರಿವರ್ತನೆಗೆ ನಿಮಿತ್ತರಾಗಬೇಕು. ಆದ್ದರಿಂದ ಈಗ ಮನಸ್ಸಿನ ಒಂದು ಸೆಕೆಂಡ್ ಸಹ ವ್ಯರ್ಥವಾಯಿತು ಎಂದರೆ ಬಹಳಷ್ಟು ಕಳೆದುಕೊಳ್ಳುವಿರಿ, ಒಂದು ಸಂಕಲ್ಪವನ್ನೂ ಸಹ ಸಾಧಾರಣ ಮಾತೆಂದು ತಿಳಿಯಬೇಡಿ, ವರ್ತಮಾನ ಸಮಯ ಸಂಕಲ್ಪದ ಹಲ್ಚಲ್ ಸಹ ದೊಡ್ಡ ಹಲ್ಚಲ್ ಎಂದು ಪರಿಗಣಿಸಲಾಗುವುದು. ಏಕೆಂದರೆ ಈಗ ಸಮಯ ಬದಲಾಗಿದೆ, ಪುರುಷಾರ್ಥದ ಗತಿಯೂ ಸಹ ಬದಲಾಗಿದೆ. ಆದ್ದರಿಂದ ಸಂಕಲ್ಪದಲ್ಲಿಯೂ ಸಹ ಫುಲ್ ಸ್ಟಾಪ್ನ ಅವಶ್ಯಕತೆಯಿದೆ. ಯಾವಾಗ ಮನಸಾ ಮೇಲೆ ಇಷ್ಟು ಗಮನ ಇಡುವಿರಿ, ಆಗ ಏರುವ ಕಲೆಯ ಮುಖಾಂತರ ವಿಶ್ವ ಪರಿವರ್ತಕ ಆಗಲು ಸಾಧ್ಯ.

ಸ್ಲೋಗನ್:
ಕರ್ಮದಲ್ಲಿ ಯೋಗದ ಅನುಭವವಾಗುವುದು ಅರ್ಥಾತ್ ಕರ್ಮಯೋಗಿಗಳಾಗುವುದು.