26.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಚಲನೆಯನ್ನು ಸುಧಾರಣೆ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿರಬೇಕಾಗಿದೆ, ತಂದೆಯ ನೆನಪೇ ನಿಮ್ಮನ್ನು
ಸದಾ ಸೌಭಾಗ್ಯಶಾಲಿಗಳನ್ನಾಗಿ ಮಾಡುವುದು”
ಪ್ರಶ್ನೆ:
ಸ್ಥಿತಿಯನ್ನು
ಯಾವ ಸಮಯದಲ್ಲಿ ಗುರುತಿಸಬಹುದು? ಒಳ್ಳೆಯ ಸ್ಥಿತಿಯೆಂದು ಯಾವುದಕ್ಕೆ ಹೇಳುತ್ತಾರೆ?
ಉತ್ತರ:
ಕಾಯಿಲೆಯ ಸಮಯದಲ್ಲಿ ಸ್ಥಿತಿಯನ್ನು ಗುರುತಿಸಬಹುದಾಗಿದೆ. ಕಾಯಿಲೆಯ ಸಮಯದಲ್ಲಿಯೂ ಖುಷಿಯಿರಬೇಕು
ಮತ್ತು ಹರ್ಷಿತಮುಖ ಚಹರೆಯಿಂದ ಎಲ್ಲರಿಗೆ ತಂದೆಯ ನೆನಪನ್ನು ತರಿಸುತ್ತಾ ಇರಿ. ಇದೇ ಒಳ್ಳೆಯ
ಸ್ಥಿತಿಯಾಗಿದೆ. ಒಂದುವೇಳೆ ಸ್ವಯಂ ಅಳುತ್ತೀರಿ, ಬೇಸರವಾಗಿರುತ್ತೀರೆಂದರೆ ಅನ್ಯರನ್ನು
ಹರ್ಷಿತರನ್ನಾಗಿ ಹೇಗೆ ಮಾಡುವಿರಿ? ಏನೇ ಆದರೂ ಸಹ ಅಳಬಾರದು.
ಓಂ ಶಾಂತಿ.
ಎರಡು ಶಬ್ಧಗಳ ಗಾಯನವಿದೆ - ದೌರ್ಭಾಗ್ಯಶಾಲಿ ಮತ್ತು ಸೌಭಾಗ್ಯಶಾಲಿಗಳು. ಸೌಭಾಗ್ಯವು ಹೊರಟು ಹೋದರೆ
ಅದಕ್ಕೆ ದುರ್ಭಾಗ್ಯವೆಂದು ಹೇಳಲಾಗುತ್ತದೆ. ಸ್ತ್ರೀಯ ಪತಿಯು ಮರಣ ಹೊಂದಿದರೆ ಅದಕ್ಕೂ
ದುರ್ಭಾಗ್ಯವೆಂದು ಹೇಳಲಾಗುತ್ತದೆ ಏಕೆಂದರೆ ಒಂಟಿಯಾಗಿ ಬಿಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ
- ನಾವು ಸದಾಕಾಲಕ್ಕಾಗಿ ಸೌಭಾಗ್ಯಶಾಲಿಗಳಾಗುತ್ತೇವೆ. ಅಲ್ಲಿ ದುಃಖದ ಮಾತಿರುವುದಿಲ್ಲ. ಮೃತ್ಯುವಿನ
ಹೆಸರೂ ಇರುವುದಿಲ್ಲ. ವಿಧವೆ ಎಂಬ ಹೆಸರೇ ಇರುವುದಿಲ್ಲ. ವಿಧವೆಗೆ ದುಃಖವಾಗುತ್ತದೆ,
ಅಳುತ್ತಿರುತ್ತಾರೆ. ಭಲೆ ಸಾಧು-ಸಂತರಿದ್ದಾರೆ ಆದರೆ ಅವರಿಗೆ ದುಃಖವಿರುವುದಿಲ್ಲವೆಂದಲ್ಲ. ಕೆಲವರು
ಹುಚ್ಛರಾಗುತ್ತಾರೆ, ಕೆಲವರು ರೋಗಿಗಳಾಗುತ್ತಾರೆ. ಇದು ರೋಗಿ ಪ್ರಪಂಚವಾಗಿದೆ. ಸತ್ಯಯುಗವು ನಿರೋಗಿ
ಪ್ರಪಂಚವಾಗಿದೆ. ಮಕ್ಕಳು ತಿಳಿದುಕೊಳ್ಳುತ್ತೀರಿ, ನಾವು ಭಾರತವನ್ನು ಪುನಃ ಶ್ರೀಮತದಂತೆ
ನಿರೋಗಿಯನ್ನಾಗಿ ಮಾಡುತ್ತೇವೆ. ಈ ಸಮಯದಲ್ಲಿ ಮನುಷ್ಯರ ನಡವಳಿಕೆಯು ಬಹಳ ಕೆಟ್ಟು ಹೋಗಿದೆ. ಈಗ
ನಡವಳಿಕೆಯನ್ನು ಸುಧಾರಣೆ ಮಾಡುವುದಕ್ಕೂ ಅವಶ್ಯವಾಗಿ ವಿಭಾಗವಿರುತ್ತದೆ. ಶಾಲೆಗಳಲ್ಲಿಯೂ
ವಿದ್ಯಾರ್ಥಿಗಳ ರಿಜಿಸ್ಟರ್ ಇಡಲಾಗುತ್ತದೆ, ಅದರಿಂದ ಅವರ ನಡವಳಿಕೆಯ ಬಗ್ಗೆ ತಿಳಿಯುತ್ತದೆ.
ಆದ್ದರಿಂದ ತಂದೆಯೂ ಸಹ ಮೊದಲು ರಿಜಿಸ್ಟರ್ ಇಡಿಸಿದ್ದರು. ಪ್ರತಿಯೊಬ್ಬರೂ ತಮ್ಮ ರಿಜಿಸ್ಟರನ್ನಿಡಿ.
ತಮ್ಮ ಚಲನೆಯನ್ನು ನೋಡಿಕೊಳ್ಳಿ - ನಾನು ಯಾವುದೇ ತಪ್ಪು ಮಾಡುತ್ತಿಲ್ಲವೆ? ಮೊದಲ ಮಾತೇನೆಂದರೆ
ತಂದೆಯನ್ನು ನೆನಪು ಮಾಡುವುದಾಗಿದೆ. ಅದರಿಂದಲೇ ನಿಮ್ಮ ಚಾರಿತ್ರ್ಯವು ಸುಧಾರಣೆಯಾಗುತ್ತದೆ. ಒಬ್ಬ
ತಂದೆಯ ನೆನಪಿನಿಂದ ಆಯಸ್ಸು ವೃದ್ಧಿಯಾಗುತ್ತದೆ. ಇವು ಜ್ಞಾನ ರತ್ನಗಳಾಗಿವೆ. ನೆನಪಿಗೆ ರತ್ನಗಳೆಂದು
ಹೇಳಲಾಗುವುದಿಲ್ಲ. ನೆನಪಿನಿಂದಲೇ ನಿಮ್ಮ ನಡವಳಿಕೆಯು ಸುಧಾರಣೆಯಾಗುತ್ತದೆ. ಈ 84 ಜನ್ಮಗಳ
ಚಕ್ರವನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದರ ಮೇಲೆ ತಿಳಿಸಬೇಕಾಗಿದೆ -
ವಿಷ್ಣು ಮತ್ತು ಬ್ರಹ್ಮಾ. ಶಂಕರನ ನಡವಳಿಕೆಯೆಂದು ಹೇಳುವುದಿಲ್ಲ. ಬ್ರಹ್ಮಾ ಮತ್ತು ವಿಷ್ಣುವಿಗೆ
ಪರಸ್ಪರ ಸಂಬಂಧವೇನೆಂದು ನೀವು ತಿಳಿದುಕೊಂಡಿದ್ದೀರಿ. ವಿಷ್ಣುವಿನ ಎರಡು ರೂಪಗಳು ಈ
ಲಕ್ಷ್ಮೀ-ನಾರಾಯಣರಾಗಿದ್ದಾರೆ. ಅವರೇ ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. 84
ಜನ್ಮಗಳಲ್ಲಿ ತಾವೇ ಪೂಜ್ಯ, ತಾವೇ ಪೂಜಾರಿಯಾಗುತ್ತೀರಿ. ಪ್ರಜಾಪಿತ ಬ್ರಹ್ಮನೂ ಅವಶ್ಯವಾಗಿ ಇಲ್ಲಿಯೇ
ಬೇಕಲ್ಲವೆ. ಸಾಧಾರಣ ತನುವೇ ಬೇಕಾಗಿದೆ. ಬಹಳ ಮಂದಿ ಈ ಮಾತಿನಲ್ಲಿಯೇ ತಬ್ಬಿಬ್ಬಾಗುತ್ತಾರೆ.
ಬ್ರಹ್ಮಾರವರು ಪತಿತ-ಪಾವನ ತಂದೆಯ ರಥವಾಗಿದ್ದಾರೆ, ದೂರ ದೇಶದಲ್ಲಿರುವವರು ಪರ ದೇಶದಲ್ಲಿ ಬಂದರೆಂದು
ಹೇಳುತ್ತಾರೆ ಅಂದರೆ ಪಾವನ ಪ್ರಪಂಚವನ್ನಾಗಿ ಮಾಡುವ ಪತಿತ-ಪಾವನ ತಂದೆಯು ಪತಿತ ಪ್ರಪಂಚದಲ್ಲಿ ಬಂದರು.
ಪತಿತ ಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿರಲು ಸಾಧ್ಯವಿಲ್ಲ. ನಾವು ಹೇಗೆ 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಯಾರು ಮೊಟ್ಟ ಮೊದಲು ಬರುವರೋ
ಅವರದೇ 84 ಜನ್ಮಗಳಿವೆ. ಸತ್ಯಯುಗದಲ್ಲಿ ದೇವಿ-ದೇವತೆಗಳೇ ಬರುತ್ತಾರೆ. 84 ಜನ್ಮಗಳನ್ನು ಯಾರು
ತೆಗೆದುಕೊಳ್ಳುತ್ತಾರೆಂದು ಮನುಷ್ಯರಿಗೆ ವಿಚಾರವೇ ನಡೆಯುವುದಿಲ್ಲ. ಇವು ತಿಳಿದುಕೊಳ್ಳುವ
ಮಾತುಗಳಾಗಿವೆ. ಪುನರ್ಜನ್ಮವನ್ನು ಎಲ್ಲರೂ ಒಪ್ಪುತ್ತಾರೆ. 84 ಪುನರ್ಜನ್ಮಗಳಾಯಿತು ಎಂಬುದನ್ನು
ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರೂ
ಒಂದೇ ಸಲ ಬರುವುದಿಲ್ಲ ಮತ್ತು ಶರೀರ ಬಿಡುವುದಿಲ್ಲ. ಭಗವಾನುವಾಚವೂ ಇದೆ - ನೀವು ತಮ್ಮ ಜನ್ಮಗಳ
ಬಗ್ಗೆ ತಿಳಿದುಕೊಂಡಿಲ್ಲ, ಭಗವಂತನೇ ತಿಳಿಸುತ್ತಾರೆ - ನೀವಾತ್ಮಗಳು 84 ಜನ್ಮಗಳನ್ನು
ತೆಗೆದುಕೊಳ್ಳುತ್ತೀರಿ. ಈ 84 ಜನ್ಮಗಳ ಕಥೆಯನ್ನು ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ. ಇದು
ವಿದ್ಯೆಯಾಗಿದೆ. 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳುವುದು ಬಹಳ ಸಹಜವಾಗಿದೆ. ಅನ್ಯ ಧರ್ಮದವರು ಈ
ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ನಿಮ್ಮಲ್ಲಿಯೂ ಎಲ್ಲರೂ 84 ಜನ್ಮಗಳನ್ನು
ತಿಳಿದುಕೊಳ್ಳುವುದಿಲ್ಲ. ಎಲ್ಲರದೂ 84 ಜನ್ಮಗಳಿದ್ದರೆ ಎಲ್ಲರೂ ಒಟ್ಟಿಗೆ ಬಂದು ಬಿಡುವರು ಆದರೆ
ಹೀಗಾಗಲು ಸಾಧ್ಯವಿಲ್ಲ. ಎಲ್ಲವೂ ವಿದ್ಯೆ ಮತ್ತು ನೆನಪಿನ ಮೇಲೆ ಆಧಾರಿತವಾಗಿದೆ. ಅದರಲ್ಲಿಯೂ
ನಂಬರ್ವನ್ ನೆನಪಾಗಿದೆ. ಕಷ್ಟದ ವಿಷಯಕ್ಕೆ ಹೆಚ್ಚಿನ ಅಂಕಗಳಿರುತ್ತವೆ, ಅದರ ಪ್ರಭಾವವೂ ಇರುತ್ತದೆ.
ಉತ್ತಮ, ಮಧ್ಯಮ, ಕನಿಷ್ಟ ವಿಷಯಗಳಿರುತ್ತವೆಯಲ್ಲವೆ. ಇದರಲ್ಲಿ ಎರಡು ಮುಖ್ಯ ವಿಷಯಗಳಾಗಿವೆ. ತಂದೆಯು
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸಂಪೂರ್ಣ ನಿರ್ವಿಕಾರಿಗಳಾಗುತ್ತೀರಿ ಮತ್ತು ವಿಜಯ
ಮಾಲೆಯಲ್ಲಿ ಬರುತ್ತೀರಿ. ಇದು ಸ್ಪರ್ಧೆಯಾಗಿದೆ. ಮೊದಲು ಸ್ವಯಂನ್ನು ನೋಡಿಕೊಳ್ಳಿ - ನಾನು
ಎಲ್ಲಿಯವರೆಗೆ ಧಾರಣೆ ಮಾಡುತ್ತೇನೆ? ಎಷ್ಟು ನೆನಪು ಮಾಡುತ್ತೇನೆ? ನನ್ನ ನಡವಳಿಕೆ ಹೇಗಿದೆ?
ಒಂದುವೇಳೆ ನನ್ನಲ್ಲಿಯೇ ಅಳುವ ಹವ್ಯಾಸವಿದ್ದರೆ ಅನ್ಯರನ್ನು ಹರ್ಷಿತರನ್ನಾಗಿ ಹೇಗೆ ಮಾಡಬಲ್ಲೆನು?
ತಂದೆಯು ತಿಳಿಸುತ್ತಾರೆ - ಯಾರು ಅಳುವರೋ ಅವರು ಕಳೆದುಕೊಳ್ಳುವರು. ಏನೇ ಆಗಿಬಿಡಲಿ ಆದರೆ ಅಳುವ
ಅವಶ್ಯಕತೆಯಿಲ್ಲ. ಕಾಯಿಲೆಯಿದ್ದಾಗಲೂ ಸಹ ಖುಷಿಯಿಂದ ಇಷ್ಟಂತೂ ಹೇಳಬಲ್ಲಿರಿ - ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಕಾಯಿಲೆಯ ಸಮಯದಲ್ಲಿಯೇ ಸ್ಥಿತಿಯ ಬಗ್ಗೆ
ಅರ್ಥವಾಗುವುದು. ನೋವಿನಲ್ಲಿ ಸ್ವಲ್ಪ ಮುಲುಗುವ ಶಬ್ಧ ಬಂದೇ ಬರುತ್ತದೆ ಆದರೆ ತಮ್ಮನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಸಂದೇಶ ನೀಡಿದ್ದಾರೆ. ಪೈಗಂಬರ್, ಮೆಸೆಂಜರ್
ಒಬ್ಬ ಶಿವ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ಉಳಿದಂತೆ ಏನೆಲ್ಲವನ್ನೂ ತಿಳಿಸುತ್ತಾರೆಯೋ
ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಈ ಪ್ರಪಂಚದ ಏನೆಲ್ಲಾ ವಸ್ತುಗಳಿವೆಯೋ ಎಲ್ಲವೂ
ವಿನಾಶಿಯಾಗಿದೆ. ಈಗ ನಿಮ್ಮನ್ನು ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ - ಎಲ್ಲಿ ಪ್ರತಿಯೊಂದು
ವಸ್ತು ಶಕ್ತಿಶಾಲಿಯಾಗಿರುತ್ತದೆ, ಅಲ್ಲಿ ಯಾವುದೇ ವಸ್ತು ಹೊಡೆದು ಹೋಗುವ ಹೆಸರೇ ಇರುವುದಿಲ್ಲ.
ಇಲ್ಲಿ ವಿಜ್ಞಾನದಿಂದ ಎಷ್ಟೊಂದು ತಯಾರಾಗುತ್ತವೆ. ಸತ್ಯಯುಗದಲ್ಲಿ ಈ ವಿಜ್ಞಾನವೂ ಅವಶ್ಯವಾಗಿ
ಇರುವುದು ಏಕೆಂದರೆ ನಿಮಗಾಗಿ ಅಲ್ಲಿ ಬಹಳ ಸುಖವು ಬೇಕು. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ
ಏನೂ ತಿಳಿದಿರಲಿಲ್ಲ. ಭಕ್ತಿಮಾರ್ಗವು ಯಾವಾಗ ಆರಂಭವಾಯಿತು, ನೀವು ಎಷ್ಟು ದುಃಖವನ್ನು ನೋಡಿದಿರಿ,
ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ದೇವತೆಗಳಿಗೆ ಸರ್ವಗುಣ ಸಂಪನ್ನರು.... ಎಂದು
ಹೇಳಲಾಗುತ್ತದೆ. ಮತ್ತೆ ಆ ಕಲೆಗಳು ಹೇಗೆ ಕಡಿಮೆಯಾಯಿತು? ಈಗಂತೂ ಯಾವುದೇ ಕಲೆಯು ಉಳಿದಿಲ್ಲ. ಹೇಗೆ
ಚಂದ್ರಮನಲ್ಲಿಯೂ ನಿಧಾನ-ನಿಧಾನವಾಗಿ ಕಡಿಮೆಯಾಗುತ್ತದೆಯಲ್ಲವೆ.
ನಿಮಗೆ ತಿಳಿದಿದೆ - ಈ ಪ್ರಪಂಚವು ಹೊಸದಿದ್ದಾಗ ಅಲ್ಲಿ ಪ್ರತಿಯೊಂದು ವಸ್ತು ಸತೋಪ್ರಧಾನ,
ಸುಂದರವಾಗಿರುತ್ತದೆ ನಂತರ ಹಳೆಯದಾಗುತ್ತಾ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈ
ಲಕ್ಷ್ಮೀ-ನಾರಾಯಣರು ಸರ್ವಗುಣ ಸಂಪನ್ನರಾಗಿದ್ದಾರಲ್ಲವೆ. ಈಗ ತಂದೆಯು ನಿಮಗೆ ಸತ್ಯ-ಸತ್ಯವಾದ ಸತ್ಯ
ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ಈಗ ರಾತ್ರಿಯಾಗಿದೆ ನಂತರ ಹಗಲಾಗುತ್ತದೆ. ನೀವು
ಸಂಪೂರ್ಣರಾಗುತ್ತೀರೆಂದರೆ ನಿಮಗಾಗಿ ಹೊಸ ಸೃಷ್ಟಿಯು ಬೇಕು. ಆದ್ದರಿಂದ ಪಂಚ ತತ್ವಗಳು ಸತೋಪ್ರಧಾನ
(16 ಕಲಾ ಸಂಪೂರ್ಣ) ವಾಗಿ ಬಿಡುತ್ತವೆ. ಆದ್ದರಿಂದ ಶರೀರವೂ ಸಹ ನಿಮ್ಮದು ಸ್ವಾಭಾವಿಕ
ಸೌಂದರ್ಯದಿಂದ ಕೂಡಿರುತ್ತದೆ, ಸತೋಪ್ರಧಾನವಾಗಿರುತ್ತದೆ. ಇಡೀ ಪ್ರಪಂಚವೇ 16 ಕಲಾಸಂಪೂರ್ಣವಾಗಿ
ಬಿಡುತ್ತದೆ. ಈಗಂತೂ ಯಾವುದೇ ಕಲೆಯಿಲ್ಲ. ಯಾರೆಲ್ಲಾ ದೊಡ್ಡ-ದೊಡ್ಡವರು ಅಥವಾ ಮಹಾತ್ಮರಿದ್ದಾರೆಯೋ
ಅವರಿಗೆ ತಂದೆಯ ಜ್ಞಾನವನ್ನು ಕೇಳುವ ಅದೃಷ್ಟವೇ ಇಲ್ಲ. ಅವರಿಗೆ ತಮ್ಮದೇ ಆದ ಅಭಿಮಾನವಿದೆ. ಬಹಳ
ಮಟ್ಟಿಗೆ ಇದು ಬಡವರ ಅದೃಷ್ಟದಲ್ಲಿಯೇ ಇದೆ. ಇಷ್ಟು ಶ್ರೇಷ್ಠ ತಂದೆಯು ಯಾರಾದರೂ ದೊಡ್ಡ ರಾಜ ಅಥವಾ
ಪವಿತ್ರ ಋಷಿ-ಮುನಿಗಳ ತನುವಿನಲ್ಲಿ ಬರಬೇಕಾಗಿತ್ತು ಎಂದು ಕೆಲವರು ಹೇಳುತ್ತಾರೆ. ಸನ್ಯಾಸಿಗಳೇ
ಪವಿತ್ರರಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಯಾರಲ್ಲಿ ಬರುತ್ತೇನೆ? ಯಾರು ಪೂರ್ಣ 84
ಜನ್ಮಗಳನ್ನು ತೆಗೆದುಕೊಳ್ಳುವರೋ ಅವರ ತನುವಿನಲ್ಲಿಯೇ ಬರುತ್ತೇನೆ. ಒಂದು ದಿನವೂ ಕಡಿಮೆಯಾಗಬಾರದು.
ಕೃಷ್ಣನ ಜನ್ಮವಾಯಿತು, ಆ ಸಮಯದಿಂದ 16 ಕಲಾ ಸಂಪೂರ್ಣನಾದನು ನಂತರ ಸತೋ-ರಜೋ-ತಮೋದಲ್ಲಿ ಬರುತ್ತಾನೆ.
ಪ್ರತಿಯೊಂದು ವಸ್ತು ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ಸತ್ಯಯುಗದಲ್ಲಿಯೂ
ಇದೇ ರೀತಿಯಾಗುತ್ತದೆ. ಮಗುವು ಸತೋಪ್ರಧಾನವಾಗಿರುತ್ತದೆ ನಂತರ ದೊಡ್ಡವರಾದ ಮೇಲೆ ಈಗ ನಾನು ಈ
ಶರೀರವನ್ನು ಬಿಟ್ಟು ಸತೋಪ್ರಧಾನ ಮಗುವಾಗುತ್ತೇನೆಂದು ಹೇಳುವರು. ನೀವು ಮಕ್ಕಳಿಗೆ ಅಷ್ಟು
ನಶೆಯಿಲ್ಲ, ಖುಷಿಯ ನಶೆಯೇ ಏರುವುದಿಲ್ಲ. ಯಾರು ಒಳ್ಳೆಯ ಪರಿಶ್ರಮ ಪಡುವರೋ ಅವರಿಗೆ ಖುಷಿಯ
ನಶೆಯೇರುತ್ತದೆ, ಚಹರೆಯು ಹರ್ಷಿತವಾಗಿರುತ್ತದೆ. ಮುಂದೆ ಹೋದಂತೆ ನಿಮಗೆ ಸಾಕ್ಷಾತ್ಕಾರವಾಗಿರುತ್ತದೆ.
ಹೇಗೆ ಮನೆಯು ಸಮೀಪಕ್ಕೆ ಬಂದು ತಲುಪುತ್ತಿದ್ದಂತೆ ಎಲ್ಲವೂ ನೆನಪಿಗೆ ಬರುತ್ತದೆಯಲ್ಲವೆ. ಇಲ್ಲಿಯೂ
ಹಾಗೆಯೇ. ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಯಾವಾಗ ನಿಮ್ಮ ಪ್ರಾಲಬ್ಧವು ಸಮೀಪಿಸುವುದೋ ಆಗ ಬಹಳ
ಸಾಕ್ಷಾತ್ಕಾರಗಳಾಗುತ್ತಿರುತ್ತವೆ. ಖುಷಿಯಲ್ಲಿರುತ್ತೀರಿ, ಯಾರು ಅನುತ್ತೀರ್ಣರಾಗುವರೋ ಅವರು
ಸಂಕೋಚಕ್ಕೊಳಗಾಗುತ್ತಾರೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೊನೆಯಲ್ಲಿ ಬಹಳ
ಪಶ್ಚಾತ್ತಾಪ ಪಡಬೇಕಾಗುತ್ತದೆ. ನಾವು ಏನಾಗುತ್ತೇವೆಂದು ತಮ್ಮ ಭವಿಷ್ಯದ ಸಾಕ್ಷಾತ್ಕಾರವನ್ನು
ನೋಡುತ್ತೀರಿ. ತಂದೆಯು ತೋರಿಸುತ್ತಾರೆ - ನೀವು ಇಂತಿಂತಹ ವಿಕರ್ಮಗಳನ್ನು ಮಾಡಿದ್ದೀರಿ, ಪೂರ್ಣ
ರೀತಿಯಲ್ಲಿ ಓದಲಿಲ್ಲ, ವಿರೋಧಿಗಳಾದಿರಿ. ಆದ್ದರಿಂದ ಈ ಶಿಕ್ಷೆ ಸಿಗುತ್ತದೆ ಎಂದು ಹೇಳುತ್ತಾರೆ.
ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರ ಮಾಡಿಸದೆ ಶಿಕ್ಷೆಯನ್ನು ಹೇಗೆ ಕೊಡುವರು?
ನ್ಯಾಯಾಲಯದಲ್ಲಿಯೂ ನೀವು ಹೀಗೀಗೆ ಮಾಡಿದಿರಿ ಅದಕ್ಕಾಗಿ ಈ ಶಿಕ್ಷೆಯೆಂದು ಹೇಳುತ್ತಾರೆ.
ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿಯಾಗುವುದಿಲ್ಲವೋ ಅಲ್ಲಿಯವರೆಗೆ ಏನಾದರೊಂದು ನಿರ್ಬಲತೆ ಇದ್ದೇ
ಇರುತ್ತದೆ. ಆತ್ಮವು ಪವಿತ್ರವಾಗಿ ಬಿಟ್ಟರೆ ಮತ್ತೆ ಶರೀರವನ್ನು ಬಿಡಬೇಕಾಗುವುದು. ಕರ್ಮಾತೀತ
ಆತ್ಮವು ಇಲ್ಲಿರಲು ಸಾಧ್ಯವಿಲ್ಲ. ಆ ಸ್ಥಿತಿಯನ್ನು ನೀವು ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವೀಗ
ಹಿಂತಿರುಗಿ ಹೋಗಿ ಹೊಸ ಪ್ರಪಂಚದಲ್ಲಿ ಬರಲು ತಯಾರು ಮಾಡಿಕೊಳ್ಳುತ್ತೀರಿ. ನಿಮ್ಮ ಪುರುಷಾರ್ಥವೇ
ಇದಾಗಿದೆ - ನಾವು ಬೇಗ ಬೇಗನೆ ಹೋಗಬೇಕು ಮತ್ತು ಬೇಗ ಬೇಗನೆ ಬರಬೇಕು. ಹೇಗೆ ಮಕ್ಕಳನ್ನು ಆಟದಲ್ಲಿ
ಓಡಿಸುತ್ತಾರಲ್ಲವೆ. ಗುರಿಯನ್ನು ಮುಟ್ಟಿ ಮತ್ತೆ ಹಿಂತಿರುಗಿ ಬರಬೇಕಾಗಿದೆ. ಅದೇರೀತಿ ನೀವೂ ಸಹ
ಬೇಗ ಬೇಗನೆ ಹೋಗಿ ಮತ್ತೆ ಮೊದಲನೇ ನಂಬರಿನಲ್ಲಿ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ ಅಂದಾಗ ಇದು
ಸ್ಪರ್ಧೆಯಾಗಿದೆ. ಶಾಲೆಯಲ್ಲಿಯೂ ಸ್ಪರ್ಧೆಯನ್ನಿಡುತ್ತಾರಲ್ಲವೆ. ನಿಮ್ಮದು ಇದು ಪ್ರವೃತ್ತಿ
ಮಾರ್ಗವಾಗಿದೆ. ಮೊಟ್ಟ ಮೊದಲು ನಿಮ್ಮದು ಪವಿತ್ರ ಗೃಹಸ್ಥ ಧರ್ಮವಾಗಿತ್ತು, ಈಗ ವಿಕಾರಿಯಾಗಿದೆ.
ಪುನಃ ನಿರ್ವಿಕಾರಿ ಪ್ರಪಂಚವಾಗುವುದು. ಈ ಮಾತುಗಳನ್ನು ನೀವು ಸ್ಮರಣೆ ಮಾಡುತ್ತಿದ್ದರೂ ಸಹ ಬಹಳ
ಖುಷಿಯಿರುವುದು. ನಾವೇ ರಾಜ್ಯವನ್ನು ಪಡೆಯುತ್ತೇವೆ ಮತ್ತು ಕಳೆದುಕೊಳ್ಳುತ್ತೇವೆ. ಹೀರೊ-ಹೀರೊಯಿನ್
ಎಂದು ಹೇಳುತ್ತಾರಲ್ಲವೆ. ವಜ್ರ ಸಮಾನ ಜನ್ಮವನ್ನು ಪಡೆದುಕೊಂಡು ಮತ್ತೆ ಹೇಗೆ ಕವಡೆಯಂತಹ ಜನ್ಮದಲ್ಲಿ
ಬರುತ್ತೀರಿ!
ಈಗ ತಂದೆಯು ತಿಳಿಸುತ್ತಾರೆ - ನೀವು ಕವಡೆಗಳ ಹಿಂದೆ ತಮ್ಮ ಸಮಯವನ್ನು ಕಳೆಯಬೇಡಿ. ಇವರೂ (ಬ್ರಹ್ಮಾ)
ಸಹ ಹೇಳುತ್ತಾರೆ - ನಾನು ಸಮಯ ವ್ಯರ್ಥ ಮಾಡುತ್ತಿದ್ದೆನು. ಆದ್ದರಿಂದ ತಂದೆಯು ನನಗೂ ಹೇಳಿದರು -
ಈಗ ನೀನು ನನ್ನವನಾಗಿ ಈ ಆತ್ಮಿಕ ಸೇವೆಯಲ್ಲಿ ತೊಡಗಬೇಕು ಎಂದ ಕೂಡಲೇ ಎಲ್ಲವನ್ನೂ ಬಿಟ್ಟು ಬಿಟ್ಟೆನು
ಅಂದರೆ ಹಣವನ್ನೇನು ಎಸೆಯಲಾಗುವುದಿಲ್ಲ. ಹಣವು ಕೆಲಸಕ್ಕೆ ಬರುತ್ತದೆ, ಹಣವಿಲ್ಲದೆ ಯಾವುದೇ ಮನೆ
ಇತ್ಯಾದಿಗಳು ಸಿಗುವುದಿಲ್ಲ. ಮುಂದೆ ಹೋದಂತೆ ದೊಡ್ಡ-ದೊಡ್ಡ ಧನವಂತರು ಬರುತ್ತಾರೆ, ನಿಮಗೆ ಸಹಯೋಗ
ಕೊಡುತ್ತಿರುತ್ತಾರೆ. ಕೊನೆಗೊಂದು ದಿನ ನೀವು ದೊಡ್ಡ-ದೊಡ್ಡ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿಯೂ
ಹೋಗಿ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇತಿಹಾಸವು ಆದಿಯಿಂದ ಅಂತ್ಯದವರೆಗೆ ಹೇಗೆ
ಪುನರಾವರ್ತನೆಯಾಗುತ್ತದೆ ಎಂದು ಭಾಷಣ ಮಾಡಬೇಕಾಗುವುದು. ಸತ್ಯಯುಗದಿಂದ ಕಲಿಯುಗದವರೆಗೆ ಸೃಷ್ಟಿಯ
ಇತಿಹಾಸ-ಭೂಗೋಳವನ್ನು ನಾವು ನಿಮಗೆ ತಿಳಿಸುತ್ತೇವೆ. ನಡವಳಿಕೆಯ ಮೇಲೂ ಸಹ ನೀವು ಬಹಳಷ್ಟು
ತಿಳಿಸಬಹುದು. ಈ ಲಕ್ಷ್ಮೀ-ನಾರಾಯಣ ಮಹಿಮೆ ಮಾಡಿ, ಭಾರತವು ಎಷ್ಟು ಪಾವನವಾಗಿತ್ತು! ದೈವೀ
ಗುಣಗಳಿತ್ತು! ಈಗಂತೂ ವಿಕಾರಿ ಗುಣಗಳಿವೆ. ಅವಶ್ಯವಾಗಿ ಚಕ್ರವು ಪುನಃ ಪುನರಾವರ್ತನೆಯಾಗುವುದು.
ನಾವು ವಿಶ್ವದ ಇತಿಹಾಸ-ಭೂಗೋಳವನ್ನು ತಿಳಿಸುತ್ತೇವೆಂದು ಹೇಳಬೇಕು. ಅಲ್ಲಿ ಒಳ್ಳೊಳ್ಳೆಯವರು
ಹೋಗಬೇಕು. ಹೇಗೆ ಥಿಯೋಸೋಫಿಕಲ್ ಸೊಸೈಟಿಯಲ್ಲಿ ನೀವು ಭಾಷಣ ಮಾಡಿ - ಕೃಷ್ಣನು ದೇವತೆಯಾಗಿದ್ದನು,
ಸತ್ಯಯುಗದಲ್ಲಿದ್ದನು, ಮೊಟ್ಟ ಮೊದಲು ಶ್ರೀಕೃಷ್ಣನೇ ಸತ್ಯಯುಗದಲ್ಲಿ ನಾರಾಯಣನಾಗುತ್ತಾನೆ. ನಾವು
ನಿಮಗೆ ಶ್ರೀಕೃಷ್ಣನ 84 ಜನ್ಮಗಳ ಕಥೆಯನ್ನು ತಿಳಿಸುತ್ತೇವೆ. ಯಾವುದನ್ನು ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ಈ ಟಾಪಿಕ್ ಬಹಳ ದೊಡ್ಡದಾಗಿದೆ! ಬುದ್ಧಿವಂತರು ಹೋಗಿ ಭಾಷಣ ಮಾಡಬೇಕು.
ನಾವು ವಿಶ್ವದ ಮಾಲೀಕರಾಗುತ್ತೇವೆಂದು ಈಗ ನಿಮ್ಮ ಮನಸ್ಸಿನಲ್ಲಿ ಬರುತ್ತಿದೆ ಅಂದಮೇಲೆ ನಿಮಗೆ ಎಷ್ಟು
ಖುಷಿಯಿರಬೇಕು! ಒಳಗೆ ಕುಳಿತು ಇದೇ ಸ್ಮರಣೆ ಮಾಡುತ್ತಾ ಇರಿ ಆಗ ನಿಮಗೆ ಈ ಪ್ರಪಂಚದಲ್ಲಿ ಏನೂ
ಭಾಸವಾಗುವುದಿಲ್ಲ. ನೀವಿಲ್ಲಿ ಪರಮಪಿತ ಪರಮಾತ್ಮನ ಮೂಲಕ ವಿಶ್ವದ ಮಾಲೀಕರಾಗಲು ಬರುತ್ತೀರಿ. ಈ
ಪ್ರಪಂಚಕ್ಕೇ ವಿಶ್ವವೆಂದು ಹೇಳಲಾಗುತ್ತದೆ. ಬ್ರಹ್ಮ ಲೋಕ ಅಥವಾ ಸೂಕ್ಷ್ಮವತನಕ್ಕೆ ವಿಶ್ವವೆಂದು
ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ವಿಶ್ವದ ಮಾಲೀಕನಾಗುವುದಿಲ್ಲ, ನೀವು ಮಕ್ಕಳನ್ನೇ
ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಎಷ್ಟು ಗುಹ್ಯ ಮಾತುಗಳಾಗಿವೆ! ನಿಮ್ಮನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತೇನೆ ಮತ್ತೆ ನೀವು ಮಾಯೆಗೆ ದಾಸರಾಗಿ ಬಿಡುತ್ತೀರಿ. ಇಲ್ಲಿ ಸನ್ಮುಖದಲ್ಲಿ
ಯೋಗದಲ್ಲಿ ಕೂರಿಸಿದಾಗಲೂ ಸಹ ನೆನಪು ತರಿಸಬೇಕು - ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ, ತಂದೆಯನ್ನು
ನೆನಪು ಮಾಡಿ. 5 ನಿಮಿಷದ ನಂತರ ಪುನಃ ಹೇಳಿ, ನಿಮ್ಮ ಯೋಗದ ಕಾರ್ಯಕ್ರಮವು ನಡೆಯುತ್ತದೆಯಲ್ಲವೆ.
ಅನೇಕರ ಬುದ್ಧಿಯು ಅಲ್ಲಿ-ಇಲ್ಲಿ ಹೋಗುತ್ತದೆ ಆದ್ದರಿಂದ 5-10 ನಿಮಿಷಗಳ ನಂತರ ಪುನಃ ಸಾವಧಾನ
ನೀಡಬೇಕು. ತಮ್ಮನ್ನು ಆತ್ಮನೆಂದು ತಿಳಿದು ಕುಳಿತಿದ್ದೀರಾ? ತಂದೆಯನ್ನು ನೆನಪು ಮಾಡುತ್ತಿದ್ದೀರಾ?
ಆಗ ಸ್ವಯಂನ ಮೇಲೂ ಗಮನವಿರುವುದು. ತಂದೆಯು ಇವೆಲ್ಲಾ ಯುಕ್ತಿಗಳನ್ನು ತಿಳಿಸುತ್ತಾರೆ. ಪದೇ-ಪದೇ
ಸಾವಧಾನ ನೀಡಿ - ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೀರಾ? ಆಗ
ಯಾರ ಬುದ್ಧಿಯೋಗವು ಅಲೆಯುತ್ತಿರುವುದೋ ಅವರು ಜಾಗೃತರಾಗುತ್ತಾರೆ. ಪದೇ-ಪದೇ ಈ ನೆನಪು ತರಿಸಬೇಕು.
ತಂದೆಯ ನೆನಪಿನಿಂದಲೇ ನೀವು ಪಾರಾಗುವಿರಿ. ಅಂಬಿಗನೇ ನನ್ನ ದೋಣಿಯನ್ನು ಪಾರು ಮಾಡು ಎಂದು
ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಮುಕ್ತಿಧಾಮದಲ್ಲಿ ಹೋಗುವುದಕ್ಕಾಗಿ ಅರ್ಧಕಲ್ಪ
ಭಕ್ತಿ ಮಾಡಿದ್ದೀರಿ. ಈಗ ನನ್ನನ್ನು ನೆನಪು ಮಾಡಿ ಆಗ ಮುಕ್ತಿಧಾಮದಲ್ಲಿ ಹೋಗುತ್ತೀರಿ. ನೀವು
ಪಾಪವನ್ನು ಕಳೆಯುವುದಕ್ಕಾಗಿಯೇ ಕುಳಿತುಕೊಳ್ಳುತ್ತೀರಿ ಅಂದಮೇಲೆ ಪಾಪವನ್ನು ಮಾಡಬಾರದಲ್ಲವೆ.
ಇಲ್ಲದಿದ್ದರೆ ಪಾಪಗಳು ಉಳಿದು ಬಿಡುತ್ತವೆ. ಇದು ನಂಬರ್ವನ್ ಪುರುಷಾರ್ಥವಾಗಿದೆ - ತನ್ನನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಹೀಗೆ ಎಚ್ಚರಿಕೆ ನೀಡುತ್ತಾ ಇರುವುದರಿಂದ ತನ್ನ
ಮೇಲೂ ಗಮನವಿರುವುದು. ತನಗೆ ತಾನು ಸಾವಧಾನ ನೀಡಬೇಕಾಗಿದೆ. ಮೊದಲು ಸ್ವಯಂ ನೆನಪಿನಲ್ಲಿ ಕುಳಿತಾಗಲೇ
ಅನ್ಯರನ್ನೂ ಕೂರಿಸುವಿರಿ. ನಾವಾತ್ಮರಾಗಿದ್ದೇವೆ, ನಮ್ಮ ಮನೆಗೆ ಹೋಗುತ್ತೇವೆ ನಂತರ ಬಂದು
ರಾಜ್ಯವನ್ನು ಮಾಡುತ್ತೇವೆ. ತನ್ನನ್ನು ಶರೀರವೆಂದು ತಿಳಿಯುವುದೂ ಸಹ ಒಂದು ಕಠಿಣವಾದ ಕಾಯಿಲೆಯಾಗಿದೆ.
ಆದ್ದರಿಂದಲೇ ಎಲ್ಲರೂ ರಸಾತಳದಲ್ಲಿ ಹೊರಟು ಹೋಗಿದ್ದಾರೆ. ಈಗ ಅವರನ್ನು ಪುನಃ ರಕ್ಷಿಸಬೇಕಾಗಿದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಸಮಯವನ್ನು ಆತ್ಮಿಕ ಸೇವೆಯಲ್ಲಿ ಸಫಲ ಮಾಡಿಕೊಳ್ಳಬೇಕಾಗಿದೆ. ಜೀವನವನ್ನು ವಜ್ರ ಸಮಾನ
ಮಾಡಿಕೊಳ್ಳಬೇಕಾಗಿದೆ. ತನಗೆ ತಾನು ಸಾವಧಾನ ನೀಡುತ್ತಿರಬೇಕು. ಶರೀರವೆಂದು ತಿಳಿಯುವ ಕಠಿಣ
ಕಾಯಿಲೆಯಿಂದ ಮುಕ್ತರಾಗುವ ಪುರುಷಾರ್ಥವಾಗಿದೆ.
2. ಎಂದೂ ಮಾಯೆಗೆ ದಾಸರಾಗಬಾರದು, ಅಂತರ್ಮುಖಿಯಾಗಿ ಇದೇ ಜಪ ಮಾಡಬೇಕು - ನಾನಾತ್ಮನಾಗಿದ್ದೇನೆ.
ನಾವು ಭಿಕಾರಿಯಿಂದ ರಾಜಕುಮಾರರಾಗುತ್ತೇವೆಂಬ ಖುಷಿಯಿರಲಿ.
ವರದಾನ:
ವೈಸ್ಲೆಸ್ನ (ನಿರ್ವಿಕಾರಿ)
ಶಕ್ತಿಯ ಮುಖಾಂತರ ಸೂಕ್ಷ್ಮವತನ ಹಾಗೂ ಮೂರೂ ಲೋಕದ ಅನುಭವ ಮಾಡುವಂತಹ ಶ್ರೇಷ್ಠ ಭಾಗ್ಯವಾನ್ ಭವ.
ಯಾವ ಮಕ್ಕಳ ಬಳಿ
ವೈಸ್ಲೆಸ್ನ ಶಕ್ತಿ ಇದೆ, ಬುದ್ಧಿಯೋಗ ಸಂಪೂರ್ಣ ರಿಫೈನ್ ಇದೆ - ಇಂತಹ ಭಾಗ್ಯವಾನ್ ಮಕ್ಕಳು ಸಹಜವಾಗಿ
ಮೂರೂ ಲೋಕದ ಸಂಚಾರ ಮಾಡಲು ಸಾಧ್ಯ. ಸೂಕ್ಷ್ಮವತನದವರೆಗೆ ತಮ್ಮ ಸಂಕಲ್ಪವನ್ನು ತಲುಪಿಸಲು ಸರ್ವ
ಸಂಬಂಧಗಳ ಸಾರವಿರುವ ಸೂಕ್ಷ್ಮ ನೆನಪಿನ ಅವಶ್ಯಕವಿದೆ. ಇದೇ ಎಲ್ಲಕ್ಕಿಂತ ಶಕ್ತಿಶಾಲಿ ಸೂತ್ರವಾಗಿದೆ,
ಇದರ ಮಧ್ಯೆ ಮಾಯೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ಷ್ಮವತನದ ಶೋಭೆಯನ್ನು ಅನುಭವ
ಮಾಡುವುದಕ್ಕಾಗಿ ಸ್ವಯಂನ್ನು ವೈಸ್ಲೆಸ್ನ ಶಕ್ತಿಯಿಂದ ಸಂಪನ್ನ ಮಾಡಿಕೊಳ್ಳಿ.
ಸ್ಲೋಗನ್:
ಯಾವುದೇ ವ್ಯಕ್ತಿ, ವಸ್ತು
ಹಾಗೂ ವೈಭವದ ಪ್ರತಿ ಆಕರ್ಷಿತವಾಗುವುದೇ ಒಡನಾಡಿ ತಂದೆಗೆ ಸಂಕಲ್ಪದಿಂದ ವಿಚ್ಛೇದನ ಕೊಡುವುದು.